ತಪ್ಪೊಪ್ಪಿಗೆ -
ಒಂದು ಕೃತ್ಯ ಅಥವಾ ಹೊಣೆಯ ಆರೋಪಕ್ಕೆ ಒಳಗಾದ ಕಕ್ಷಿ, ಅಂಥ ಕೃತ್ಯ ಅಥವಾ ಹೊಣೆಗೆ ಸಂಬಂಧಿಸಿದಂತೆ ಮಾಡಿಕೊಂಡ ಒಪ್ಪಿಕೆ (ಕನ್‍ಫೆಷನ್). ವಿಧಿವ್ಯವಹರಣೆಯ ಯಥಾಕ್ರಮದಲ್ಲಿ ನ್ಯಾಯಾಧೀಶ ಅಥವಾ ನ್ಯಾಯಾಲಯದ ಮುಂದೆ ಮಾಡಿಕೊಂಡ ತಪ್ಪೊಪ್ಪಿಗೆ ನ್ಯಾಯಿಕ (ಜ್ಯುಡಿಷಿಯಲ್) ಎನಿಸಿಕೊಳ್ಳುತ್ತದೆ. ಬೇರೆಯವರ ಮುಂದೆ, ಒಬ್ಬ ಅಧಿಕಾರಿ ಅಥವಾ ಇತರರ ಮುಂದೆ, ಮಾಡಿಕೊಳ್ಳಲಾದ್ದು ನ್ಯಾಯಾತಿರಿಕ್ತ (ಎಕ್ಸಸ್ಟ್ರಾ- ಜ್ಯುಡಿಷಿಯಲ್) ಎನಿಸಿಕೊಳ್ಳುತ್ತದೆ. ಒಂದು ಕೃತ್ಯಕ್ಕೆ ಸಂಬಂಧಿಸಿದ ತನಿಖೆ ಮಾಡುವಾಗ ಪೋಲೀಸರು ಕಲೆಹಾಕುವ ಪುರಾವೆಗಳಲ್ಲಿ ಆಪಾದಿತ ಸ್ವಪ್ರೇರಣೆಯಿಂದ ತಪ್ಪೊಪ್ಪಿಕೊಳ್ಳುವುದನ್ನು ಸ್ಥಿರೀಕರಿಸುವುದೂ ಸೇರಿರುತ್ತದೆ. ತಪ್ಪೊಪ್ಪಿಗೆಯನ್ನು ಆಪಾದಿತ, ಕೃತ್ಯಕ್ಕೆ ಸಂಬಂಧಿಸಿದ ಸಾಕ್ಷಿ — ಇಬ್ಬರೂ ಮಾಡಬಹುದು. ಇದರ ಉದ್ದೇಶ ಎರಡು ತೆರನಾದ್ದು : 1. ಸಾಕ್ಷಿ ತನ್ನ ಹೇಳಿಕೆಯನ್ನು ಮುಂದೆ ಬದಲಾಯಿಸದಿರುವುದು, 2 ಸಾಕ್ಷಿ ಕೊಟ್ಟ ಮಾಹಿತಿಯ ಆಧಾರದ ಮೇಲೆ ಮೊಕದ್ದಮೆಯ ಅಭಿಯೋಗದಿಂದ ತಪ್ಪಿಸಿಕೊಳ್ಳದೆ ಇರುವುದು.

ತಪ್ಪೊಪ್ಪಿಗೆಯನ್ನು ಸ್ಥಿರೀಕರಿಸುವ ಅಧಿಕಾರ ಇರುವುದು ದಂಡನ್ಯಾಯಾಧೀಶರಿಗೆ ಮಾತ್ರ ಪೊಲೀಸರಿಗಲ್ಲ. ಅವರು ನ್ಯಾಯಾಂಗದ ದಂಡನ್ಯಾಯಾಧೀಶರಾಗಿರಬಹುದು ಅಥವಾ ಕಾರ್ಯಾಂಗದಲ್ಲಿ ನ್ಯಾಯಾಧೀಶರ ಕಾರ್ಯ ನಿರ್ವಹಿಸುವ ಅಧಿಕಾರಿಯಾಗಿರಬಹುದು (ಉ: ಅಸಿಸ್ಟೆಂಟ್ ಕಮಿಷನರ್). ಆದರೆ, ಸಂಬಂಧಿಸಿದ ಕೃತ್ಯವನ್ನು ವಿಚಾರಣೆ ಮಾಡುವ ನ್ಯಾಯಾಧೀಶರಿಗೆ ಈ ಅಧಿಕಾರವಿಲ್ಲ.

ಪೊಲೀಸ್ ಬಂಧನದಲ್ಲಿರುವ ಆರೋಪಿ ಸ್ವಪ್ರೇರಣೆಯಿಂದ ಇಚ್ಚೆಪಟ್ಟರೆ ಮಾತ್ರ ತಾನು ಎಸಗಿರುವ ಕೃತ್ಯದ ಬಗ್ಗೆ ತನ್ನ ತಪ್ಪೊಪ್ಪಿಗೆ ಮಾಡಿಕೊಳ್ಳಬಹುದು. ತಪ್ಪೊಪ್ಪಿಗೆಯನ್ನು ಸ್ಥೀರಿಕರಿಸುವುದಕ್ಕೆ ಮೊದಲು, ಸಂಬಂಧಿಸಿದ ನ್ಯಾಯಾಧೀಶ ತಪ್ಪೊಪ್ಪಿಗೆದಾರನನ್ನು ವಿಚಾರಣೆ ಮಾಡಿ ಈ ಅಂಶಗಳನ್ನು ತನಗೆ ತೃಪ್ತಿಯಾಗುವಂತೆ ಮನವರಿಕೆ ಮಾಡಿಕೊಳ್ಳಬೇಕು : 1 ಆತ ಸ್ವಪ್ರೇರಣೆ ಹಾಗೂ ಸ್ವಇಚ್ಚೆಯಿಂದ ತಪ್ಪೊಪ್ಪಿಗೆ ಹೇಳಿಕೆ ನೀಡುತ್ತಿದ್ದಾನೆ, 2. ಈ ಹೇಳಿಕೆ ನೀಡುವಲ್ಲಿ ಆತನ ಮೇಲೆ ಪೋಲಿಸರ ಬಲಾತ್ಕಾರವಾಗಲಿ, ಪ್ರಭಾವವಾಗಲಿ ಎಳ್ಳಷ್ಟೂ ಇಲ್ಲ. ಅನಂತರ, ತಪ್ಪೊಪ್ಪಿಗೆ ಹೇಳಿಕೆ ನೀಡಬೇಕಾದ ನಿರ್ಬಂಧವಿಲ್ಲವೆಂದೂ ಈ ಹೇಳಿಕೆಯನ್ನು ನ್ಯಾಯಾಲಯದಲ್ಲಿ ಆತನಿಗೆ ವಿರುದ್ಧವಾಗಿ ಉಪಯೋಗಿಸಬಹುದು ಎಂದೂ ಆತನಿಗೆ ಮನದಟ್ಟಾಗುವಂತೆ ತಿಳಿಯಹೇಳಬೇಕು. ಇಷ್ಟಾದಮೇಲೆ, ದಂಡಪ್ರಕ್ರಿಯಾಸಂಹಿತೆಯ ನಿಯಮಕ್ಕೆ ಅನುಗುಣವಾಗಿ ಸ್ಥಿರೀಕರಿಸಲಾಗುವ ಈ ಹೇಳಿಕೆ ಸಮಂಜಸವೂ ಸ್ವೀಕಾರಯೋಗ್ಯವೂ ಆದ ಪುರಾವೆಯಾಗುತ್ತದೆ.

ಆಪಾದಿತನ ಹೇಳಿಕೆಯನ್ನು ಸ್ಥಿರೀಕರಿಸುವ ಬಗೆಗೂ ಸಾಕ್ಷಿಯ ಹೇಳಿಕೆಯನ್ನು ಸ್ಥಿರೀಕರಿಸುವ ಬಗೆಗೂ ವ್ಯತ್ಯಾಸವಿದೆ. ಸಾಕ್ಷಿಯ ಹೇಳಿಕೆಯನ್ನು ಸ್ಥಿರೀಕರಿಸುವಾಗ ಆಪಾದಿತನ ಹೇಳಿಕೆಯನ್ನು ಸ್ಥಿರೀಕರಿಸುವಾಗಿನ ಸೂಕ್ಷ್ಮತೆ ಹಾಗೂ ಮುಂಜಾಗ್ರತೆ ಕ್ರಮಗಳನ್ನು ತೆಗೆದುಕೊಳ್ಳಬೇಕಾಗಿಲ್ಲ. ಸಾಕ್ಷಿಯು ಸ್ವಪ್ರೇರಣೆ ಹಾಗೂ ಸ್ವ ಇಚ್ಛೆಯ ಇಂಗಿತವನ್ನು ಕಂಡುಕೊಂಡರೆ ಸಾಕು.

ತಪ್ಪೊಪ್ಪಿಗೆ ಹೇಳಿಕೆಯನ್ನು ಸ್ಥಿರೀಕರಿಸುವ ನ್ಯಾಯಾಧೀಶ ದಂಡಪ್ರಕ್ರಿಯಾ ಸಂಹಿತೆಯ ನಿಯಮಗಳನ್ನು ಸಂಪೂರ್ಣ ಅನುಸಿರಿಸಿದ್ದಾನೆಂಬುದು, ಹೇಳಿಕೆ ನೀಡುವವನ್ನು ಅವನು ವಿಚಾರಣೆ ಮಾಡುವಾಗ ಹಾಕುವ ಪ್ರಶ್ನೋತ್ತರಗಳಿಂದ ದೃಢಪಡುವಂತಿರಬೇಕು. ಪ್ರಶ್ನೋತ್ತರಗಳನ್ನು ಬರವಣಿಗೆಗಿಳಿಸಿ ಅನಂತರ, ಆತನ ತಪ್ಪೊಪ್ಪಿಗೆ ಹೇಳಿಕೆಯನ್ನು ಆತ ನೀಡಬೇಕಾದ ನಿರ್ಬಂಧವೇನೂ ಇಲ್ಲವೆಂದೂ ಆತನ ತಪ್ಪೊಪ್ಪಿಗೆ ಹೇಳಿಕೆಯನ್ನು ಆತನ ವಿರುದ್ಧವಾಗಿ ನ್ಯಾಯಾಲಯದಲ್ಲಿ ಬಳಸಬಹುದೆಂದೂ ಆತನಿಗೆ ವಿವರಿಸಿದ್ದೇನೆ. ಮತ್ತು ಆತ ಸ್ವಪ್ರೇರಣೆಯಿಂದ ತಪ್ಪೊಪ್ಪಿದ್ದಾನೆ ಎಂಬ ದೃಢನಂಬಿಕೆ ನನಗಿದೆ. ಆತನನ್ನು ವಿಚಾರ ಮಾಡಿದ ಅನಂತರ ತಪ್ಪೊಪ್ಪಿಗೆ ಹೇಳಿಕೆಯನ್ನು ನನ್ನ ಸಮ್ಮುಖದಲ್ಲಿ ತೆಗೆದುಕೊಳ್ಳಲಾಯಿತು. ಅದನ್ನು ಆತನಿಗೆ ಓದಿ ಹೇಳಿದಾಗ ಆತ ಅದನ್ನು ಸರಿ ಎಂದು ಒಪ್ಪಿದ್ದಾನೆ. ಮತ್ತು ಅದು ಆತನ ಪೂರ್ಣ ಮತ್ತು ಸತ್ಯದಿಂದ ಕೂಡಿದ ಹೇಳಿಕೆ ಎಂಬ ಜ್ಞಾಪನವನ್ನು(ಮೆಮೋರ್ಯಾಂಡಮ್) ನ್ಯಾಯಾಧೀಶ ಲಿಖಿಸಬೇಕು. ಹಾಗೆ ದಾಖಲಿಸಿದ ಮೇಲೆ ಆರೋಪಿಯಿಂದ ತಪ್ಪೊಪ್ಪಿಗೆ ಸಿಂಧುವಾಗಿದ್ದರೂ, ಅದು ಹೆಚ್ಚೆಂದರೆ ಸಾಕ್ಷ್ಯದ ಒಂದು ಭಾಗವಾಗುತ್ತದೆ ಅಷ್ಟೆ. ಈ ಸಾಕ್ಷ್ಯವನ್ನು ದಾಖಲಿಸಿರುವ ಉಳಿದ ಸಾಕ್ಷ್ಯಗಳ ಮೂಸೆಯಲ್ಲಿ ತೀರ್ಪು ನೀಡುವಾಗ ವಿಮರ್ಶಿಸಲಾಗುತ್ತದೆ. ವಿನಃ ತಪ್ಪೊಪ್ಪಿಗೆಯನ್ನೇ ಆಧರಿಸಿ, ತೀರ್ಪು ನೀಡಲಾಗದು.
ತಪ್ಪೊಪ್ಪಿಗೆ ಯಾವುದೇ ರೀತಿಯದ್ದಾಗಿರಲಿ, (ನ್ಯಾಯಿಕ ಅಥವಾ ನ್ಯಾಯಾತಿರಿಕ್ತ) ಅದು 2 ರೀತಿಯ ಪರೀಕ್ಷೆಗೊಳಪಡಬೇಕು. (ವಕೀಲ್ ನಾಯಕ್ ಗಿs ಬಿಹಾರ್ ರಾಜ್ಯ-ಸುಪ್ರೀಂ ಕೋರ್ಟ್)

1. ತಪ್ಪೊಪ್ಪಿಗೆ ನಂಬಲರ್ಹವಾದದ್ದಾಗಿರಬೇಕು.
2. ತಪ್ಪೊಪ್ಪಿಗೆ ಸ್ಥಿರೀಕರಣಗೊಳ್ಳಬೇಕು.

ಹೀಗೆ ತೆಗೆದುಕೊಳ್ಳಲಾದ ತಪ್ಪೊಪ್ಪಿಗೆ ಹೇಳಿಕೆಯನ್ನು ಕೃತ್ಯದ ವಿಚಾರಣೆಯಲ್ಲಿ ಬಳಸಬಹುದು. ಆದರೆ, ಈ ತಪ್ಪೊಪ್ಪಿಗೆ ಹೇಳಿಕೆಯನ್ನು ನಿಯಮ ಬದ್ಧವಾಗಿ ತೆಗೆದುಕೊಂಡಿಲ್ಲವೆಂದಾಗಲಿ ಹೇಳಿಕೆ ನೀಡುವವನ ಸ್ವಪ್ರೇರಣೆ ಮತ್ತು ಸ್ವಇಚ್ಚೆಗೆ ಕುಂದುಂಟಾಗಿದೆ ಎಂದಾಗಲಿ ಸಂದೇಹ ಬಂದರೆ ವಿಚಾರಣೆ ಮಾಡುವ ನ್ಯಾಯಾಧೀಶ ಈ ಹೇಳಿಕೆಯನ್ನು ಪುರಾವೆಯಲ್ಲಿ ಸೇರಿಸದೆ ತಳ್ಳಿಹಾಕುಬಹುದು.
(ವಿ.ಎಚ್.ಜಿ.)
ಪರಿಷ್ಕರಣೆ : ಆರ್ ಶೈಲೇಶ್

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ